ಡಾ. ಭಾರತಿ ಮರವಂತೆ ವೃತ್ತಿಯಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರು. ಪ್ರವೃತ್ತಿಯಲ್ಲಿ ರಂಗೋಲಿ ಕಲಾವಿದರಾಗಿದ್ದು ಕರ್ನಾಟಕದಲ್ಲಿ ರಂಗೋಲಿ ಕಲೆಯಲ್ಲಿ ಡಾಕ್ಟರೇಟ್ ಪಡೆದ ಮೊದಲ ಸಂಶೋಧಕರೆಂಬ ಹೆಗ್ಗಳಿಕೆ ಇವರದ್ದಾಗಿದೆ ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಇವರನ್ನು ಈ ಕ್ಷೇತ್ರದಲ್ಲಿ ಬೆಳೆಯುವಂತೆ ಮಾಡಿತು. ಬಿ.ಏ ಪದವಿ ಓದುವಾಗ ಕನ್ನಡ ಪ್ರಾಧ್ಯಾಪಕರಾಗಿದ್ದ ಪ್ರೊ.ಕನರಾಡಿ ವಾದಿರಾಜ ಭಟ್ ಭಾರತಿ ಬಿಡಿಸಿದ ರಂಗೋಲಿಯನ್ನು ನೋಡಿ ‘ರಂಗೋಲಿ ಸ್ಪೆಷಲಿಸ್ಟ್’ ಎಂದೇ ಕರೆಯುತ್ತಿದ್ದರಂತೆ ಕಾಲೇಜಿನಲ್ಲಿ ಮತ್ತು ಜಿಲ್ಲೆಯ ಇತರ ಕಡೆಗಳಲ್ಲಿ ರಂಗೋಲಿ ಸ್ಪರ್ಧೆ ನಡೆದಾಗ ಗುರುಗಳು ಅಲ್ಲಿಗೆ ಕಳುಹಿಸುತ್ತಿದ್ದರಂತೆ. ಬಹುಮಾನವೂ ಬರುತ್ತಿತ್ತು.ಉಡುಪಿಯ ರಂಗೋಲಿ ಬ್ರಹ್ಮ ಬಿ.ಪಿ.ಬಾಯಿರಿಯವರು ಭಾರತಿಯವರಿಗೆ ಹರಸಿದ್ದರಂತೆ. ಉಡುಪಿಯಿಂದ ಗೋಕಾಕ ಊರಿನವರೆಗೆ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನಗಳು ಬಂದಿರುವುದು ನೋಡಿದ ಕನರಾಡಿ ಗುರುಗಳು ಈ ಕ್ಷೇತ್ರ ನಿನಗೆ ಒಲಿಯುತ್ತದೆ. ಭಾರತದ ಸಂಸ್ಕೃತಿಯನ್ನು ಉಳಿಸುವ ಮಹತ್ತರವಾದ ಕೆಲಸವಿದು ಎಂದು ಕಾಲೇಜಿನ ದಿನಗಳಲ್ಲಿ ಮನ ತುಂಬಿ ಹರಸಿದ ಪ್ರೇರಣೆಯೇ “ತನಗೆ ದೊಡ್ಡ ಶಕ್ತಿ” ಎನ್ನುತ್ತಾರೆ ಭಾರತಿ. ತನ್ನ ತಾಯಿಯಾದ ಸುಶೀಲ, ತಂದೆ ಶೇಷಗಿರಿ, ತಮ್ಮ ವಿಶ್ವನಾಥ, ತಂಗಿ, ಅಕ್ಕ, ಚಿಕ್ಕಮ್ಮ – ಚಿಕ್ಕಪ್ಪ, ಅತ್ತೆ,ಮಾವಂದಿರು, ಬಂಧು ಬಳಗ ಎಲ್ಲರ ಸಹಕಾರವೂ ಈ ಕ್ಷೇತ್ರದಲ್ಲಿ ಮುಂದುವರಿಯಲು ಕಾರಣವಾಯಿತು ಎನ್ನುತ್ತಾರೆ. ರಂಗವಲ್ಲಿ ರಚಿಸುವಾಗ ಪುಡಿಗಳನ್ನು ತಮ್ಮನಾದ ವಿಶ್ವನಾಥ ತನ್ನ ಗಾಡಿಯಲ್ಲಿ ಹೊತ್ತುಕೊಂಡು ತಂದು ಕೊಟ್ಟಂತಹ ದಿನಗಳು, ಅಮ್ಮ ಸದಾ ತನ್ನೊಂದಿಗೆ ಬೆನ್ನೆಲುಬಾಗಿ ನಿಂತು ನೀಡಿದ ಪ್ರೀತಿ ತಾನು ಈ ಕಲಾ ಕೆಲಸ ಮಾಡಲು ಸಾಧ್ಯವಾಯಿತು ಎನ್ನುತ್ತಾರೆ. ಪತ್ರಿಕೆಗಳಲ್ಲಿ ಬಂದಾಗ, ಪ್ರಶಸ್ತಿ ಬಂದಾಗ, ಸನ್ಮಾನವಾದಾಗ ತಮಗೇ ಈ ಗೌರವ ಸಿಗುತ್ತಿದೆ ಎಂದು ತಿಳಿದು ಸಹಕರಿಸಿದವರು ನನ್ನ ಕುಟುಂಬದವರು ಎನ್ನುತ್ತಾರೆ ಭಾರತಿ ಮರವಂತೆ.
ಹುಟ್ಟಿದ ಊರು : ಕರ್ನಾಟಕದ ಉಡುಪಿ ಜಿಲ್ಲೆಯ ಮರವಂತೆ ಭಾರತಿಯವರ ಹುಟ್ಟಿದ ಊರು. ಕನ್ನಡ ಮಾಧ್ಯಮದಲ್ಲಿ ಓದಿದ ಇವರ ಬಾಲ್ಯದ ಶಿಕ್ಷಣ ಮರವಂತೆ, ನಾವುಂದ, ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ಅಜ್ಜಿ ಮನೆಯಾದ ತಾರಿಕಟ್ಟೆ, ಗೋಳಿಯಂಗಡಿ, ಬೆಳ್ವೆಯಲ್ಲಿ ಕಲಿತರು. ಕಾಲೇಜು ವಿದ್ಯಾಭ್ಯಾಸವನ್ನು ಬಸರೂರು, ಉಡುಪಿಯ ಚಿತ್ರಕಲಾ ಮಂದಿರ, ಹಾಸನದಲ್ಲಿ ಬಿ.ಎಡ್ ಪದವಿ, ಮೈಸೂರು ವಿಶ್ವದ್ಯಾಲಯದಲ್ಲಿ ಕನ್ನಡ .ಎಂ .ಎ. ಪದವಿ, ಡಾ. ಅಕ್ಕಮಹಾದೇವಿ ಪ್ರಾಧ್ಯಾಪಕರು ಮೈಸೂರು ವಿಶ್ವವಿದ್ಯಾನಿಲಯ ಇವರ ಮಾರ್ಗದರ್ಶನದಲ್ಲಿ “ಕರಾವಳಿ ಕರ್ನಾಟಕದ ರಂಗೋಲಿ ಕಲೆ” ಎನ್ನುವ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದರು.
ಸಂಶೋಧನೆ – ಕ್ಷೇತ್ರ ಕಾರ್ಯ – ದಾಖಲಾತಿ : ಡಾ. ಭಾರತಿ ಮರವಂತೆಯವರು ಸಂಶೋಧಕರೂ ಆಗಿದ್ದು “ಸಾಮಾನ್ಯ ಜನಸಮುದಾಯದಿಂದ ತೊಡಗಿ ಬುಡಕಟ್ಟು ಜನಸಮುದಾಯದವರಲ್ಲಿರುವ ರಂಗೋಲಿ, ಹಲಿ, ಹಸೆ ಚಿತ್ತಾರವನ್ನೂ ಸಂಶೋಧನೆಗೆ ಕ್ಷೇತ್ರ ಕಾರ್ಯದ ಮೂಲಕ ಹೊಸದಾದ ಹೊಳಹನ್ನು ಕಂಡುಕೊಂಡವರು. ಉತ್ತರ ಕನ್ನಡದ ದೀವರು, ಗಾಮೊಕ್ಕಲಿಗಳು, ಹಾಲಕ್ಕಿಗಳು,ಇವರನ್ನು ಮುಖತ ಭೇಟಿ ಮಾಡಿ ಧಾಖಲಾತಿ ಸಂಗ್ರಹದ ಮೂಲಕ ತನ್ನದೇ ಛಾಪನ್ನು ರಂಗೋಲಿ ಕ್ಷೇತ್ರದಲ್ಲಿ ಮೂಡಿಸಿದವರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕಿರು ಸಂಶೋಧನಾ ಯೋಜನೆಯಲ್ಲಿ ಡಾ. ಭಾರತಿ ಮರವಂತೆಯವರು ಆಯ್ಕೆಯಾಗಿದ್ದು “ಜಾನಪದ ಚಿತ್ತಾರಗಳು” ವಿಷಯದ ಮೇಲೆ ಡಾ. ಅಶೋಕ ಆಳ್ವ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.ಇದೇ ವಿಶ್ವವಿದ್ಯಾಲಯದ ಕನ್ನಡ ಜಾನಪದ ನಿಘಂಟು ಯೋಜನೆಯಲ್ಲಿ ೩ ಸಂಪುಟಗಳಿಗೆ ದೇಸೀ ಪದಗಳ ಸಂಗ್ರಹ, ದೇಶೀ ಕೃಷಿ ವಿಜ್ಜ್ನ್ಯಾನ ಕೋಶದಲ್ಲಿ ಕೆಲಸ ನಿರ್ವಹಿಸಿದ್ದಾರೆ.
೨೦೧೦–೨೦೧೨ರಲ್ಲಿ ಉಡುಪಿ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷೆ : ಬೆಂಗಳೂರಿನ ರಾಮನಗರದಲ್ಲಿ ಜಾನಪದದ ಲೋಕ ಆರಂಭಗೊಂಡ ಹಂತದಲ್ಲಿ ಉಡುಪಿ ಜಿಲ್ಲೆಯ ಜಾನಪದ ಪರಿಷತ್ತಿನ ಅಧ್ಯಕ್ಷರು ಭಾರತಿಯವರಾಗಿದ್ದರು. ೩ ವರ್ಷಗಳ ಕಾಲ ಜಾನಪದ ವಿದ್ವಾಂಸರಾದ ಶಾಂತಿ ನಾಯಕ್ , ಎಸ್.ಎ ಕೃಷ್ಣಯ್ಯ. ಪ್ರೊ.ಕನರಾಡಿ ವಾದಿರಾಜ ಭಟ್ , ಗಣನಾಥ ಎಕ್ಕಾರ್ ರಂತಹ ಹಿರಿಯ ವಿದ್ವಾಂಸರ ಸಹಕಾರದಿಂದ ನೆಲ ಮೂಲ ಸಂಸ್ಕೃತಿಗೆ ಸಂಬಂಧಿಸಿದ ಸಂಗ್ರಹ ಚಟುವಟಿಕೆಗಳು ಆಗಿದ್ದವು.
ಅಲಕ್ಷಿತ ಜನ ಸಮುದಾಯದ ಅಧ್ಯಯನ : ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಯೋಜನೆಗಳಲ್ಲಿ “ಕೊಂಕಣಿ ಖಾರ್ವಿ ಜನಸಮುದಾಯದ ಸಾಹಿತ್ಯ-ಕಲೆ-ಸಂಸ್ಕೃತಿಯ” ಕುರಿತು ಕಿರು ಸಂಶೋಧನೆಯನ್ನು ನಡೆಸುತ್ತಿದ್ದಾರೆ.
ನಾಟಕ ಅಕಾಡೆಮಿಯಿಂದ ಕಲಾವಿದರ ಫೆಲೋಶಿಪ್ : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರು ಕಲಾವಿದರಿಗೆ ನೀಡುವ ಫೆಲೋಶಿಪ್ ಭಾರತಿಯವರಿಗೆ ದೊರಕಿದೆ. ಇವರ ಮಾರ್ಗದರ್ಶನದಲ್ಲಿ “ರಂಗಭೂಮಿಯಲ್ಲಿ ಬಣ್ಣಗಾರಿಕೆ ಎನ್ನುವ ವಿಷಯಾಧಾರಿತ ಸಂಶೋಧನೆ ಮಾಡಿದ್ದಾರೆ.
ರಂಗೋಲಿ ಕಲಾ ಪರಿಷತ್ : ರಂಗೋಲಿ ಕಲೆಯನ್ನು ಸಂಗ್ರಹಣೆ ಮತ್ತು ದಾಖಲು ಮಾಡಲು ರಂಗೋಲಿ ಕಲಾ ಪರಿಷತ್ ಎನ್ನುವ ಇವರದ್ದೇ ಪರಿಕಲ್ಪನೆ ಸಂಸ್ಥೆ ೨೦೧೦ರಲ್ಲಿ ಸ್ಥಾಪನೆಗೊಂಡಿತ್ತು. ಇದರ ವತಿಯಿಂದ ಕೆಲವು ಕೃತಿಗಳೂ ಪ್ರಕಟಣೆಗೊಂಡಿದ್ದವು. ಬುಡಕಟ್ಟಿನಿಂದ ತೊಡಗಿ ಸಾಮಾನ್ಯ ಜನಸಮುದಾಯದವರ ಸೇಡಿ ಚಿತ್ತಾರಗಳನ್ನು ಸಂಗ್ರಹ ಪ್ರಸ್ತುತ ಮಾಡಲಾಗುತ್ತಿದೆ
ಕೃತಿಗಳ ಪ್ರಕಟಣೆ : ಡಾ. ಭಾರತಿ ಮರವಂತೆಯ ಸಂಶೋಧನಾ ಕೃತಿಯಾದ “ಕರಾವಳಿ ಕರ್ನಾಟಕದ ರಂಗೋಲಿ ಕಲೆ” ಪ್ರಬಂಧವು “ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು” ಇವರ ಆರ್ಥಿಕ ನೆರವಿನಿಂದ ಪ್ರಕಟಣೆಗೊಂಡಿದೆ .ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ “ಜಾನಪದ ಚಿತ್ತಾರಗಳು” ಎನ್ನುವ ಕಿರು ಸಂಶೋಧನಾ ಕೃತಿ ಪ್ರಕಟಣೆಗೊಂಡಿದೆ. ದೇವದಾಸಿಯರ ಹಾಡುಗಳು, ಹಾಡಿಗೆ ಹನ್ನೆರಡಂಗ, ಕಥಿ ಹೇಳೂ ಹಾಡ್ಗಲ್, ರಂಗೋಲಿ, ಹಬ್ಬಗಳಿಗೆ ರಂಗೋಲಿ, ಜಾನಪದ ಇಣುಕುನೋಟ, ಜಾನಪದ ಸಾಹಿತ್ಯದಲ್ಲಿ ಮಹಿಳೆ ಮತ್ತು ಇತರ ಲೇಖನಗಳು,ಮೌಲ್ಯ ಸಾಧನೆ ಇತ್ಯಾದಿ ೧೦ಕ್ಕೂ ಹೆಚ್ಚು ಕೃತಿಗಳು ಏನ್ .ಆರ್ .ಎಂ. ಹೆಚ್ .ಪ್ರಕಾಶನ ಕೋಟೆಶ್ವರ ಉಡುಪಿ ಜಿಲ್ಲೆ ಇವರಿಂದ ಪ್ರಕಟಣೆಗೊಂಡಿದೆ
ಶ್ರೀ ರಂಗೋಲಿ ಪತ್ರಿಕೆ : ಡಾ. ಭಾರತಿ ಮರವಂತೆಯವರು ಶ್ರೀ ರಂಗೋಲಿ ಎನ್ನುವ ಪತ್ರಿಕೆ ನಡೆಸುತ್ತಿದ್ದಾರೆ. ಇದು ಭಾರತದ ಮೊದಲ ಪತ್ರಿಕೆಯಾಗಿದೆ. ಇದರಲ್ಲಿ ರಂಗೋಲಿ ವಿನ್ಯಾಸಗಳು, ರಂಗೋಲಿ ಕಲಾವಿದರ ಪರಿಚಯ, ಬುಡಕಟ್ಟು ಜನ ಸಮುದಾಯದವರಲ್ಲಿ ಹಲಿ, ಹಸೆ ಚಿತ್ತಾರ, ಸಾಮಾನ್ಯ ಜನರಲ್ಲಿರುವ ರಂಗೋಲಿ ಚಿತ್ತಾರದ ಪರಿಚಯವಿದೆ. ಈಗಾಗಲೇ ೧೫ ಸಂಚಿಕೆಗಳು ಪ್ರಕಟಗೊಂಡು ಓದುಗರ ಕ್ಯೆ ಸೇರಿದೆ
ಸಾವಿರಾರು ವಿದ್ಯಾರ್ಥಿಗಳಿಗೆ ರಂಗೋಲಿ ಪ್ರಾತ್ಯಕ್ಷಿಕೆ – ತರಭೇತಿ : ಡಾ.ಭಾರತಿಯವರು ಭಾರತದ ಸಂಸ್ಕೃತಿಯ ಪ್ರತಿಬಿಂಬವಾಗಿರುವ ರಂಗೋಲಿ ಕಲೆಯನ್ನು ಕರ್ನಾಟಕದಾದ್ಯಂತ ಪ್ರಸಾರ ಮಾಡುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತರಭೇತಿ ನೀಡಿದ್ದಾರೆ. ೨೦೦೫ನೇ ವರ್ಷದಿಂದಲೇ ಆರಂಭವಾದ ಈ ಕಾಯಕ ಪ್ರಸ್ತುತವೂ ಬಿಡುವಿದ್ದಾಗ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ . ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ನಲ್ಲಿ ೨೦೦೬ರಿಂದಲೇ ಪ್ರತಿ ವರ್ಷ ವಿದ್ಯಾರ್ಥಿಗಳು ತರಭೇತಿ ಪಡೆಯುತ್ತಿದ್ದಾರೆ, ಅರಸೀಕೆರೆ, ಹಾಸನ, ಸಾಗರ, ಉಡುಪಿ, ಬೈಂದೂರು, ಹರಪನಹಳ್ಳಿ,ಕುಂದಾಪುರ ಮತ್ತು ಬಾಂಬೆಯಂತಹ ನಗರಗಳಲ್ಲಿ ರಂಗೋಲಿ ಪ್ರದರ್ಶನ ಮತ್ತು ತರಭೇತಿ ನೀಡಿದ್ದಾರೆ. ಈವರೆಗೆ ಸುಮಾರು ೫,೦೦೦ ವಿದ್ಫ್ಯಾರ್ಥಿಗಳು ಇವರಿಂದ ರಂಗೋಲಿಯ ಮಾಹಿತಿ ಮತ್ತು ಕುರಿತು ತರಭೇತಿ ಪಡೆದಿದ್ದಾರೆ ರಂಗೋಲಿ ಕಲಿಸುವಿಕೆ, ಲೇಖನಗಳ ಪ್ರಕಟಣೆ, ಉಪನ್ಯಾಸಗಳನ್ನೂ ನೀಡುವಿಕೆ, ಕ್ಯಾನ್ ವಾಸ್ ನಲ್ಲಿ ರಂಗೋಲಿ ಪೇಂಟಿಂಗ್ ಪ್ರಯೋಗ ಆಕಾಶವಾಣಿಯಲ್ಲಿ ಭಾಷಣ ಮತ್ತು ಕಲಾವಿದೆಯಾಗಿ ಸಂದರ್ಶನ, ಡಿ.ಡಿ.ಚಂದನದಲ್ಲಿ ಬೆಳಗು ಕಾರ್ಯಕ್ರಮದಲ್ಲಿ “ಸಾಧಕರೊಂದಿಗೆ ಸಂವಾದ”ದಲ್ಲಿ ಪರಿಚಯದಿಂದ ತೊಡಗಿ ಹಲವಾರು ದೂರದರ್ಶನ ಕಾರ್ಯಕ್ರಮದಲ್ಲಿ ಕಲಾವಿದೆಯಾಗಿ ಸಂದರ್ಶನ, ಪ್ರಸಾರಗೊಂಡಿವೆ. ಭಾರತಿಯವರ ಕುರಿತಾಗಿ ಸಾಕಷ್ಟು ದಿನ ಪತ್ರಿಕೆಗಳು ವಾರ ಪತ್ರಿಕೆಗಳು ಇವರ ಸಾಧನೆಯನ್ನು ಪರಿಚಯ ಮಾಡಿವೆ. ಇವರು ಜನ ಸಾಮಾನ್ಯರು ರಚಿಸುವ ರಂಗೋಲಿಯನ್ನು ಸಂಗ್ರಹಿಸುವುದರ ಜೊತೆಗೆ ತಾವೇ ಹೊಸ ಹೊಸ ವಿನ್ಯಾಸವನ್ನು ಸೃಷ್ಟಿಸುತ್ತಾರೆ .
ರಂಗೋಲಿ ಕಲಾ ಪ್ರದರ್ಶನದ ವಿಶಿಷ್ಟತೆ : ಡಾ ಭಾರತಿ ಮರವಂತೆಯವರ ರಂಗೋಲಿಯಲ್ಲಿ ಸಂಪ್ರದಾಯ – ಸಂಸ್ಕೃತಿಯ ವಿಶಿಷ್ಟತೆ ಇದೆ. ಬೃಹತ್ ಗಾತ್ರದ ರಂಗೋಲಿಗಳು ನೂರಾರು ಕಾರ್ಯಕ್ರಮಗಳಲ್ಲಿ ಬಿಡಿಸಿದ್ದಾರೆ. ಇವರದ್ದೆ ಆಗಿರುವ ಬಣ್ಣಗಳ ಸಂಯೋಜನೆ, ತೆಳ್ಳಗಿನ ರೇಖೆಗಳು, ಬುಡಕಟ್ಟು ಜನರ ಚಿತ್ತಾರದ ವಿನ್ಯಾಸಗಳನ್ನು ರಂಗೋಲಿಯಲ್ಲಿ ತರುತ್ತಾರೆ. ವಿಷಯವನ್ನು ವಸ್ತುವಾಗಿಸಿಕೊಂಡು ರಂಗೋಲಿ ಬಿಡಿಸಿವುದು ಭಾರತಿಯವರ ಪ್ರಯೋಗವಾಗಿದೆ. ೨೦೧೮ರಲ್ಲಿ ಬೆಂಗಳೂರಿನಲ್ಲಿ ಡೆಸ್ಟಿನೇಷನ್ ಹೆರಿಟೇಜ್ ಅವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾರತಿಯವರು ಕೆಂಪೇಗೌಡ ಅವರನ್ನು ವಸ್ತುವಾಗಿಸಿಕೊಂಡು ರಂಗೋಲಿ ರಚಿಸಿದ್ದರು ಅದೇ ರೀತಿ ರಂಗೋಲಿಯನ್ನು ಕ್ಯಾನ್ ವಾಸ್ ನಲ್ಲಿ ಭಾರತಿಯವರು ತಂದಿರುವುದು ಹೊಸ ಪ್ರಯೋಗವಾಗಿದೆ. ನೀರ ಮೇಲೆ ರಂಗೋಲಿ, ಬುಟ್ಟಿ ಚಿತ್ತಾರ ಇತ್ಯಾದಿಗಳು ಭಾರತಿಯವರ ರಂಗೋಲಿ ಪ್ರದರ್ಶನದ ವಿಶಿಷ್ಟತೆ
ಉಡುಪಿಯ“ಯು“ಚಾನೆಲ್ ನಲ್ಲಿ ರಂಗೋಲಿ ಎಪಿಸೋಡ್ ಪ್ರಸಾರ : ಕರ್ನಾಟಕದ ಉಡುಪಿಯಲ್ಲಿರುವ “ಯು” ಚಾನೆಲ್ ” ನಲ್ಲಿ ಡಾ. ಭಾರತಿ ಮರವಂತೆಯವರ ೫೨ ಎಪಿಸೋಡ್ ಗಳು ಪ್ರಸಾರಗೊಂಡಿವೆ.. ಅದರ ನಿರ್ದೇಶಕರಾದ ಪ್ರಸಾದ್ ರಾವ್ ಅವರು ಕಾಳಜಿ ವಹಿಸಿ “ಹಬ್ಬಳಿಗೆ ರಂಗೋಲಿಗಳು ಹೇಗೆ ಮಹತ್ವವೆನಿಸುತ್ತದೆ” ಎನ್ನುವ ವಿಷಯವನ್ನಿಟ್ಟುಕೊಂಡು ಪ್ರಸಾರ ಮಾಡಿದ್ದರು.
ಪ್ರಶಸ್ತಿ –ಸನ್ಮಾನಗಳು : ಡಾ. ಭಾರತಿ ಮರವಂತೆಯವರಯವರ ಕಲಾ ಜೀವನದ ಕುರಿತಾಗಿ ಹುಬ್ಬಳ್ಳಿಯ ಶಿವಾನಂದ ಎನ್ನುವ ಸಂಶೋಧಕರೊಬ್ಬರು”ಭಾರತಿಯವರ ಕಲಾ ಜೀವನ’ ಎನ್ನುವ ಕಿರು ಸಂಶೋಧನಾ ಯೋಜನೆಯನ್ನು ಈಗಾಗಲೇ ಮುಗಿಸಿದ್ದಾರೆ. ಭಾರತಿಯವರ ಸಾಧನೆಯನ್ನು ಗುರುಗಿಸಿ ೨೦೦೪ ರಿಂದಲೇ ಅನೇಕ ಆಕಾಡೆಮಿಗಳು, ಸಂಘ ಸಂಸ್ಥೆಗಳು, ಪ್ರಶಸ್ತಿ ಸನ್ಮಾನಗಳನ್ನು ನೀಡಿದ್ದಾರೆ. ೨೦೧೧ರಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕಿತ್ಯೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಇಂದಿರಾ ಗಾಂಧಿ ಸದ್ಭಾವನಾ ಪ್ರಶಸ್ತಿ, ಕರ್ನಾಟಕ ಕಲಾ ಮಾಧ್ಯಮ ರತ್ನ ಪ್ರಶಸ್ತಿ, ಉಪಾದ್ಯಾಯ ಸನ್ಮಾನ್ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಶ್ರೀ ಬಸವೇಶ್ವರ ಸಮಾಜ ಸೇವಾ ಪ್ರಶಸ್ತಿ, ರಂಗ ಪ್ರಪಂಚ ಪ್ರಶಸ್ತಿ, ಸುವರ್ಣ ಕನ್ನಡ ರತ್ನ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಯನ್ನು ಪಡೆದಿದ್ದ್ದಾರೆ.
ಡಾ. ಭಾರತಿ ಮರವಂತೆಯವರು ಉಡುಪಿ ಜಿಲ್ಲಾ ಜಾನಪದ ಪರಿಷತ್ತಿನ ಮಾಜಿ ಅಧ್ಯಕ್ಷೆ, ಕರ್ನಾಟಕ ರಾಜ್ಯ ಕಲಾವಿದರ ವೇದಿಕೆ ಬೆಂಗಳೂರು ಇದರ ಶಾಖೆಯಾದ ಉಡುಪಿ ಜಿಲ್ಲೆಯ ಅಧ್ಯಕ್ಷೆ, ಇಪ್ರೊ ರಾಮನಗರ ಬೆಂಗಳೂರು ಇದರ ಸದಸ್ಯತ್ವ, ಪಾಸಿಲ್ಸ್ ಇದರ ಸದಸ್ಯತ್ವ, ರಂಗೋಲಿ ಕಲಾ ಪರಿಷತ್ತಿನ ಕಾರ್ಯದರ್ಶಿ, ಸ್ಪೂರ್ತಿಧಾಮ ಇದರ ಸದಸ್ಯತ್ವ,ಇತ್ಯಾದಿ ಸದಸ್ಯತ್ವವನ್ನು ಹೊಂದಿದ್ದಾರೆ .
ಡಾ. ಭಾರತಿ ಮರವಂತೆಯವರ ಸಾವಿರಾರು ಸ್ವರಚಿತ ರಂಗೋಲಿಯನ್ನು ರಚಿಸಿದ್ದಾರೆ. ತರಂಗ,ಸಂಯುಕ್ತ ಕರ್ನಾಟಕ , ಕುಂದಪ್ರಭ ಪತ್ರಿಕೆಗಳಲ್ಲಿ ಅಂಕಣವಾಗಿ ಪ್ರಕಟಣೆಗೊಂಡಿವೆ. ಪ್ರಜಾವಾಣಿಯಂತ ಪತ್ರಿಕೆಗಳಲ್ಲಿ ರಂಗೋಲಿಗಳು ಪ್ರಕಟಣೆಗೊಂಡಿವೆ. ಇವರ ಲೇಖನಗಳು ವಿಜಯ ಕರ್ನಾಟಕದಲ್ಲಿ ಕುಂದಗನ್ನಡದಲ್ಲಿ ಲೇಖನ ಅಂಕಣವಾಗಿ ಪ್ರಕಟವಾಗಿತ್ತು. ಜಗಲಿ, ಜೆನಿಗೆ, ವಿಶ್ವವಾಣಿ ಇತ್ಯಾದಿ ಪತ್ರಿಕೆಗಳಲ್ಲಿ ಜಾನಪದ ಆಧಾರಿತ ಲೇಖನಗಳು ಪ್ರಕಟಗೊಂಡಿವೆ.
ಪ್ರಸ್ತುತದಲ್ಲಿ ಡಾ. ಭಾರತಿ ಮರವಂತೆಯವರು ರಂಗೋಲಿ ಕಲೆಯನ್ನು ಉಳಿಸುವಿಕೆ ಮತ್ತು ಬೆಳೆಸುವಿಕೆಗೆ ಹೊಸದಾದ WEB SITE ತೆರೆಯುತ್ತಿದ್ದಾರೆ. ಇವರಿಗೆ ಈ ಕ್ಷೇತ್ರದಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ತುಂಬು ಹೃದಯದಿಂದ ಹರಸುತ್ತಿದ್ದೇನೆ — ಕ.ವಾ.ಭ
ಪತ್ರಿಕಾ ಪ್ರಕಟಣೆಗಳು :