ಪ್ರಸ್ತಾವನೆ : “ರಂಗೋಲಿಯ ಅಂಗಳದಲ್ಲಿ“ಚುಕ್ಕೆ ಜೋಡಿಸಿ ಚಿತ್ತಾರ ಬರೆಯುವುದನ್ನು ನಾನು ಚಿಕ್ಕವಳಿದ್ದಾಗಲೇ ನೋಡಿದವಳು. ಹಾಗೆಯೇ ಮದುವೆ ಮುಂಜಿ ಬಂದಾಗ ಅಜ್ಜಿ,ಅಮ್ಮ,ದೊಡ್ಡಮ್ಮ ಸಾಲಾಗಿ ನಿಂತು ಸೋಬಾನೆ ಪದಗಳನ್ನು ಹೇಳುತ್ತಿದ್ದರು. ಹೊಸ ಬೆಳೆ ಹಬ್ಬದಲ್ಲಿ ಗದ್ದೆಯಲ್ಲಿ ಬೆಳೆದ ಹೊಸ ಬೆಳೆಯನ್ನು ಮಾವಂದಿರು, ತಂದೆ ಭಕ್ತಿಯಿಂದ ತಲೆ ಮೇಲೆ ಹೊತ್ತು ತರುತ್ತಿದ್ದರು. ತುಳಸೀ ಕಟ್ಟೆ, ಮನೆ ಒಳಗಡೆ ದೇವರ ಇದಿರು ಪೂಜೆ ಇತ್ಯಾದಿಗಳು ನಡೆಯುತ್ತಿದ್ದವು. ಇನ್ನು ಏಪ್ರಿಲ್ ಮೇ ತಿಂಗಳಲ್ಲಿ ಅಕ್ಕಪಕ್ಕದಲ್ಲಿ ನೆಲೆಸಿರುವ ಕುಡುಬಿ ಸಮುದಾಯದವರ ಹೋಳಿ ಹಬ್ಬದ ಗುಮಟೆಯ ನೃತ್ಯದ ಧ್ವನಿ ಈಗಲೂ ನೆನಪಿಗೆ ಬರುತ್ತದೆ. ಅಂದು ಮನೆಯ ಆಸುಪಾಸಿನವರೊಂದಿಗೆ ಮನೆಯಲ್ಲಿರುವ ಹಸುಗಳನ್ನು ಮೇಯಿಸಲು ಗುಡ್ಡಕ್ಕೆ ಹೋಗುತ್ತಿದ್ದೆವು. ಅದರಲ್ಲಿಯೂ ಒಂದು ಖುಷಿ ಇರುತ್ತಿತ್ಹು . ಗುಮಟೆಯ ಧ್ವನಿ ಕೇಳಿಸಿದಾಕ್ಷಣ ಎಲ್ಲಿದ್ದರು ಓಡೋಡಿ ಬರುತ್ತಿದ್ದೆವು ಪುಟ್ಟ ಪುಟ್ಟ ಮಕ್ಕಳೂ ಅವರೊಂದಿಗೆ ಹೆಜ್ಜೆ ಹಾಕುತ್ತಿದ್ದರು. ಗುಮಟೆಯ ಧ್ವನಿಯೊಂದಿಗೆ ಕಾಲಿಗೆ ಗೆಜ್ಜೆ, ಮೈ ಮೇಲಿನ ವೇಷ ಭೂಷಣಗಳು ತುಂಬಾ ಆಕರ್ಷಕವಾಗಿರುತ್ತಿತ್ತು. ಅದನ್ನು ನೋಡಿ ಮಕ್ಕಳಾದ ನಮಗೆ ಖುಷಿ ಪಡುವುದು ಬಿಟ್ಟರೆ ಬೇರೆ ಏನೂ ಗೊತ್ತಿರಲಿಲ್ಲ ಹಳ್ಳಿಯಲ್ಲಿ ಅಂದು ಬೆಳೆದ ವಾತಾವರಣವೇ ಬೇರೆ. ಇಂದು ಅಂದಿನ ದಿನಗಳಿಂದ ಬಹಳ ದೂರಕ್ಕೆ ಬಂದಿದ್ದೇವೆ. ಹಿಂದಿನ ದಿನ ಹೀಗಿತ್ತು ಎನ್ನುವುದನ್ನು ಮೆಲುಕು ಹಾಕುತ್ತಿದ್ದೇವೆ.
ಸಂಪ್ರದಾಯವೋ, ಸಂಸ್ಕೃತಿಯೋ ಗೊತ್ತಿರದೆ ನನ್ನ ಅಮ್ಮ, ಅಜ್ಜಿ, ಅತ್ತೆ ಪ್ರತಿ ನಿತ್ಯ ಹೊಸ್ತಿಲಿಗೆ ಸೇಡಿ ಬರೆಯುತ್ತಿದ್ದರು. ಅಂಗಳದಲ್ಲಿ, ತುಳಸೀ ಕಟ್ಟೆಗೆ ಪುಟ್ಟದಾದ ಎಳೆಯನ್ನು ಬರೆಯುತ್ತಿದ್ದರು. ಹೊಸ ಬೆಳೆ ಹಬ್ಬ ಬಂದಾಗ ಮಕ್ಕಳಾದ ನಮಗೆ ಖುಷಿಯೋ ಖುಷಿ. ಬಗೆಯ ತಿಂಡಿ ತಿನಿಸುಗಳ ರಾಶಿ. ಕದ್ದು ಕದ್ದು ತಿನ್ನುವುದೇ ಅದರಲ್ಲೊಂದು ಖುಷಿ. ಈ ಸಂದರ್ಭದಲ್ಲಿ ವಿಶೇಷವಾಗಿ ತುಳಸಿ ಕಟ್ಟೆ , ಕೃಷಿ ಉಪಕರಣಗಳು ಸೇಡಿ ಚಿತ್ತಾರದಿಂದ ಅಲಂಕರಣಗೊಳ್ಳುತ್ತಿದ್ದ್ದವು. ಕರಾವಳಿಯಲ್ಲಿ ಈ ಹೊಸ್ತು ಹಬ್ಬದಲ್ಲಂತೂ ಸೇಡಿ ಚಿತ್ರಗಳು ಮನೆ ತುಂಬ ಅರಳುತ್ತಿದ್ದವು. ಮುಂದೆ ಈ ವಿಷಯದಲ್ಲಿ ಅಧ್ಯಯನ ಮಾಡುತ್ತೇನೆ ಎನ್ನುವ ಅರಿವೂ ಇದ್ದಿರಲಿಲ್ಲ. ಆದರೆ ಹಿಂದಿನ ಆ ದಿನಗಳನ್ನು ಒಮ್ಮೆ ಸಿಂಹಾವಲೋಕನ ಮಾಡಿದಾಗ ಈ ಚಿತ್ರಗಳು ಎಷ್ಟೊಂದು ಸಾಮಾಜಿಕ ಸಂದೇಶ ಸಾರುತ್ತಿವೆ. ಜನಪದರ ಜೀವನದ ಅವಿಭಾಜ್ಯ ಅಂಗವಾಗಿವೆ ? ಇಂತಹ ಅಪೂರ್ವದ ಕಲಾ ಸೃಷ್ಟಿಯನ್ನು ನಮಗೆ ನೀಡಿದ ಆ ಹಿರಿಯ ತಲೆಮಾರಿಗೆ ಚಿರಋಣಿ ಎಂದು ಒಳಮನಸ್ಸು ಹೇಳುತ್ತಿರುತ್ತದೆ. ಅನಂತರ ನನ್ನ ಕಾಲೇಜಿನ ದಿನಗಳಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೆ. ಬಹುಮಾನ ಬಂದಾಗ ತುಂಬ ಖುಷಿ, ಏನೋ ದೊಡ್ಡ ಸಾಧನೆ ಮಾಡಿದ್ದೇನೆ ಅನ್ನೋ ಅನುಭವ. ಗಣಪತಿ ಹಬ್ಬ ಬಂತೆಂದರೆ ಊರಲ್ಲಿ ಜಿಲ್ಲೆಯಲ್ಲಿ ತಾಲೂಕಿನಲ್ಲಿ ರಾಜ್ಯ ಮಟ್ಟದಲ್ಲಿ ಎಲ್ಲಾ ಕಡೆ ರಂಗೋಲಿ ಸ್ಪರ್ಧೆಗೆ ಪುಡಿಗಳನ್ನು ಹಿಡಿದುಕೊಂಡು ಬಣ್ಣದ ಪುಡಿಗಳೊಂದಿಗೆ ತಿರುಗಾಟ. ಬಹುಮಾನಗಳ ಸುರಿಮಳೆ.
ಒಮ್ಮೆ ಉಡುಪಿ ಜಿಲ್ಲೆಯ ಕಡಿಯಾಳಿಯಲ್ಲಿ “ಬಿ.ಪಿ.ಬಾಯಿರಿ ಸಂಸ್ಮರಣ” ಎನ್ನುವ ಬಹುಮಾನ ಬಂದಾಗ ರಂಗವಲ್ಲಿ ಬ್ರಹ್ಮ ಬಿ.ಪಿ.ಬಾಯಿರಿಯವರ ಅನುಗ್ರಹ ನನಗಿದೆ ಎಂದು ಖುಷಿ ಪಟ್ಟಿದ್ದೆ. ಅನಂತರ ಚಿತ್ರಕಲಾ ಕಾಲೇಜು, ಬಿ.ಎಡ್ . ಪದವಿ, ಕನ್ನಡ ಎಂ .ಏ ಇದರೊಂದಿಗೆ ತರಂಗದಲ್ಲಿ ನನ್ನ ರಂಗೋಲಿ ಚಿತ್ರ ಪ್ರಕಟಣೆ ಆದಾಗ ಓದುಗರಿಂದ ಬೆಂಬಲ ಬಂತು. ಈ ಸಂದರ್ಭದಲ್ಲಿ ಸಾಂಪ್ರದಾಯಿಕ ರಂಗೋಲಿ ಚಿತ್ರಗಳ ಸಂಗ್ರಹ ಮಾಡುತ್ತಿದ್ದೆ. ಅದರ ಅರ್ಥವನ್ನು ಬರೆದುಕೊಳ್ಳುತ್ತಿದ್ದೆ. ಹೀಗೆ ಒಂದೊಂದೇ ಹೆಜ್ಜೆಗಳನ್ನು ಇಡುತ್ತಾ ಹೋದಂತೆ ಇದೇ ಕ್ಷೇತ್ರದಲ್ಲಿ ನನ್ನ ಅಧ್ಯಯನ ಮಾಡಬೇಕೆಂಬ ತೀರ್ಮಾನಕ್ಕೆ ಬಂದೆ. ಸಂಶೋಧನಾ ಕ್ಷೇತ್ರದಲ್ಲಿ ಹೊಸದಾದ ರಂಗೋಲಿಯ ಲೋಕಃವೊಂದನ್ನು ಕಂಡೆ. ಅನಂತರ ಈ ಕ್ಷೇತ್ರ ಇನ್ನಷ್ಟು ಸಮೃದ್ಧಿಯಾಗಬೇಕು, ಆಕಾಡೆಮಿಕ್ ಶಿಸ್ತಿನಲ್ಲಿ ಅಧ್ಯಯನವಾಗಬೇಕೆಂದು ರಂಗೋಲಿ ಪತ್ರಿಕೆ ಮಾಡುವ ಸಾಹಸಕ್ಕೆ ಕೈ ಹಾಕಿದೆ. ಅನಂತರದಲ್ಲಿ ರಂಗೋಲಿ ಕಲಾ ಪರಿಷತ್ ಎನ್ನುವ ಪುಟ್ಟ ಸಂಸ್ಥೆಯನ್ನು ತೆರೆದೆವು. ಈ ಸಂದರ್ಭದಲ್ಲಿ ನನಗೆ ಬೆಂಬಲವಿತ್ತವರು ನನ್ನ ಕುಟುಂಬದವರು ಮತ್ತು ಕನರಾಡಿ ಗುರುಗಳು. ರಂಗೋಲಿ ಚಿತ್ರಗಳು ಜನಪದರಿಂದ ಸಂಗ್ರಹ ಮಾಡಿದಂತೆ ನನ್ನದೇ ಆದ ಚಿತ್ರಗಳನ್ನು ರಚಿಸಿದೆ. ಅವುಗಳು ಸಾಕಷ್ಟು ಪತ್ರಿಕೆಗಳಲ್ಲಿ ಪ್ರಕಟಣೆಗೊಂಡವು.
ಹೀಗೆ ಚಿಕ್ಕ ಚಿಕ್ಕ ಹೆಜ್ಜೆಯನ್ನು ಒಂದೊಂದೇ ಇಡುತ್ತಾ ಬಂದಂತೆ ರಂಗೋಲಿಯ ಒಂದು ಬೃಹತ್ ಲೋಕವನ್ನೇ ಕಂಡಂತಾಯಿತು. ಮಾಡಿದ ಕೆಲಸಗಳು ಒಂದೆಡೆ ದಾಖಲಾಗಬೇಕು, ಇನ್ನೊಂದಿಷ್ಟು ಕೆಲಸ ಮಾಡಬೇಕು ಎನ್ನುವ ನೆಲೆಯಲ್ಲಿ “ರಂಗೋಲಿ ಜಾನಪದ” ನೆಲ ಮೂಲ ಸಂಸ್ಕೃತಿಯ ಅನಾವರಣ ಎನ್ನುವ ವೆಬ್ ಸ್ಯಟ್ ತೆರೆಯುತ್ತಿರುವೆ. ಈ website ನಲ್ಲಿ ನಾನು ಮಾಡಿದ ಕೆಲಸಗಳನ್ನೂ ಒಂದಿಷ್ಟು ಪರಿಚಯ ಮಾಡಿಕೊಂಡಿರುವೆ. ಅದಕ್ಕೂ ಕೆಲವು ಕಾರಣಗಳಿವೆ. ನಾನು ಪರಿಶ್ರಮದಿಂದ ಮಾಡಿದ ಕೆಲಸವನ್ನು ಅಥವಾ ಏಳಿಗೆಯನ್ನು ಸಹಿಸದೇ ಕೆಲವೇ ಕ್ರೂರ ಮನಸ್ಸುಗಳು ಉದ್ದೇಶಪೂರ್ವಕವಾಗಿ ನೀಡಿದ ತೊಂದರೆಗಳು ಅದನ್ನು ತಮ್ಮದನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಿದ್ದಕ್ಕಾಗಿ ಅನಿವಾರ್ಯವಾಗಿ ನಾನು ನ್ಯಾಯಾಲಯದ ಮೆಟ್ಟಿಲು ಏರುವ ಪರಿಸ್ಥಿತಿ ನಿರ್ಮಾಣವಾದ ಕಾರಣ. ಪರಿಣಾಮವೇ ನಾನು ಬದುಕುತ್ತೇನೋ ಇಲ್ಲವೋ ಎನ್ನುವ ಕ್ರೂರ ಘಟನಾವಳಿಗ ಗಳನ್ನು ಅವರೇ ನಿರ್ಮಾಣ ಮಾಡಿದ ಪರಿಣಾಮದ ಪ್ರತಿಫಲವೇ ಈ ವೆಬ್ಸೈಟ್ ಜನ್ಮ ತಾಳಿದೆ. ಅದಕ್ಕಾಗಿಯೇ ನನ್ನ ಕೆಲಸಗಳನ್ನೂ ಇಲ್ಲಿ ಅನಿವಾರ್ಯವಾಗಿ ಪರಿಚಯ ಮಾಡಿಕೊಂಡಿರುವೆ. ಇದರೊಂದಿಗೆ ರಂಗೋಲಿ ಕಲೆ ಇಂದು ವಿವಿಧ ಮುಖಗಳಲ್ಲಿ ಬೆಳೆಯುತ್ತಿದೆ, ಕಲಾವಿದರು ಉಳಿಸಿ ಬೆಳೆಸುತ್ತಿದ್ದಾರೆ ಅದು ತುಂಬ ಖುಷಿ ಕೊಡುತ್ತಿದೆ. ರಂಗೋಲಿ ಕಲೆಯ ಮೂಲ ಮತ್ತು ಇತರ ಜನಪದ ಕಲೆ – ಜನಪದ ಸಾಹಿತ್ಯವನ್ನು ಈ website ನಲ್ಲಿ ಪರಿಚಯಿಸುವ ಒಂದು ದಿಟ್ಟ ಹೆಜ್ಜೆಯ ಪ್ರತಿಫಲವೇ ಈ “ರಂಗೋಲಿಜಾನಪದ.ಕಾಮ್ “.
- ನನ್ನಲ್ಲಿ “web site” ಮೊಳಕೆ :
“ನನ್ನ ದ್ವನಿ” ಏನೆಂಬುದನ್ನು ಈಗಾಗಲೇ ನನ್ನ ವೆಬ್ ಸ್ಯೆಟ್ ನ “ಪ್ರಸ್ತಾವನೆ” ಯಲ್ಲಿ ಹೇಳಿಕೊಂಡಿದ್ದೇನೆ. “ರಂಗೋಲಿಯೊಂದಿಗಿನ ಹಾದಿಯಲ್ಲಿ” ನಾನು ಕಂಡುಕೊಂಡ ಸತ್ಯವನ್ನು ಒಂದಿಷ್ಟು ಕಲಾ ಬಂಧುಗಳಿಗೆ ಹೇಳಲೇಬೇಕೆಂಬ ತುಡಿತದ ಹಿನ್ನೆಲೆಯಲ್ಲಿ ಈ ವೆಬ್ ಸ್ಯೆಟ್ ಜನ್ಮತಾಳಿದೆ. ಸುಮಾರು ೨೦ ವರ್ಷಗಳು ನಾನು ಈ ಕ್ಷೇತ್ರದಲ್ಲಿ ನನ್ನ ಸಮಯವನ್ನು ಕಳೆದಿದ್ದೇನೆ, ಅದರ ಆಳಕ್ಕೆ ಇಳಿದಿದ್ದೇನೆ, ಅಧ್ಯಯನ-ಪ್ರಯೋಗ-ಕ್ಷೇತ್ರಕಾರ್ಯದಲ್ಲಿಯೇ ನನ್ನ ಮಾರ್ಗದರ್ಶಕರ ಸಲಹೆಯಂತೆ ನನ್ನನ್ನು ತೊಡಗಿಸಿಕೊಂಡಿದ್ದೇನೆ. ನಾನು ಕೆಲಸ ಮಾಡುತ್ತಾ ೨೫ ವರ್ಷಗಳು ಕಳೆದವು, ಗೊತ್ತೇ ಆಗಲಿಲ್ಲ. ಒಂದು ದೃಷ್ಟಿಯಲ್ಲಿ ಬಣ್ಣದೊಂದಿಗೆ ಆಟ ಆಡಿದಂತೆ ಕಳೆದೆ. “ರಂಗೋಲಿ ಪುಡಿಗಳನ್ನು ಹೊತ್ತುಕೊಂಡು ಹೋಗುವುದು, ಕೊಟ್ಟ ಜಾಗದಲ್ಲಿ ರಂಗೋಲಿ ಬಿಡಿಸುವುದು ನೋಡುಗರು ಎಷ್ಟು ಚೆನ್ನಾಗಿದೆ ಎಂದಾಗ ಆಗುವ ಸಂತೋಷ . . .ಅದೇನೋ ಗೊತ್ತಿಲ್ಲ ಈ ಬಣ್ಣದ ಹುಚ್ಚು . . .ನನ್ನನ್ನೇ ಕೇಳಿಕೊಂಡ ಕ್ಷಣಗಳು ತುಂಬಾ . . .ಯಾಕೆ ಈ ಪುಡಿಗಳೊಂದಿಗಿನ ಒಡನಾಟ ? ವಿದ್ಯಾರ್ಥಿಗಳಿಗೆ ತರಭೇತಿ ನೀಡುವಾಗ ಅಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವ ರೀತಿ . . . ಅನಂತರ ಎಲ್ಲಾ ರಂಗೋಲಿ ಅಳಿಸಿ ಬರಬೇಕಲ್ಲಾ ಎನ್ನುವ ನೋವು . . .ಅದನ್ನು ಪೈಂಟಿಂಗ್ನಲ್ಲಿ ತರುವ ಪ್ರಯತ್ನ ಮಾಡಿದೆ, ಅದೂ ಅಭಿಮಾನಿಗಳ ಪ್ರೋತ್ಸಾಹದಿಂದ ಯಶಸ್ಸು ಕಂಡಿತು. ಅನಂತರ ರಂಗೋಲಿ ಪತ್ರಿಕೆ, ಸಂಶೋಧನೆ, ಸ್ವಂತ ರಂಗೋಲಿ ವಿನ್ಯಾಸಗಳ ಸಾವಿರಾರು ರಚನೆಗಳು . . . .ನನ್ನದೇ ಲೋಕದಲ್ಲಿದ್ದ್ದ ನನಗೆ ದಿನಗಳು ಉರುಳಿದ್ದೇ ತಿಳಿಯಲಿಲ್ಲ. ನನ್ನ ಒಡನಾಡಿ ರಂಗೋಲಿಯ ಕುರಿತು ಯೋಚನೆ ಮತ್ತು ಒಂದಿಷ್ಟು ತಿಳಿದದ್ದು ಬರೆಯುವುದು. . . .ಇದರಲ್ಲಿಯೇ ಜೀವನದ ಅರ್ಧ ಭಾಗ ಕಳೆದುಹೋಯಿತು. ಹೀಗಿರುವಾಗ “ನಾನು ಮಾಡಿದ ಕೆಲಸವನ್ನು ನನ್ನದನ್ನಾಗಿ ಮಾಡಿಕೊಳ್ಳಲು ಇಷ್ಟೊಂದು ಹೋರಾಡಬೇಕೆ? ಎನ್ನುವ ಪ್ರಶ್ನೆ ೭ ವರ್ಷಗಳಿಂದ ಕೆಲವು ಕಹಿ ಘಟನೆಗಳಿಂದ ನನ್ನನ್ನು ಕಾಡತೊಡಗಿತು, ಮಾತ್ರವಲ್ಲ ಜೀವನದ ಅನಿವಾರ್ಯ ಅವಿಭಾಜ್ಯ ಭಾಗ ಎಂಬಂಥ ಪರಿಸ್ಥಿತಿ ನಿರ್ಮಾಣವಾಯಿತು, ಆಗಲೇ ನೋಡಿ ನಾನು ಒಮ್ಮೆ ಹಿಂದಿರುಗಿ ನೋಡಿದಾಗ ಎಲ್ಲಿ ಎಡವಿದ್ದೇನೆ ? ಎಂದು ನನ್ನನ್ನೇ ಪ್ರಶ್ನಿಸಿಕೊಂಡೆ. ಕೆಲಸ ಮಾಡುತ್ತಾ ಹೋದದ್ದೇ ತಪ್ಪೇ ? ಅಥವಾ “ನಾನು ಈ ಕೆಲಸ ಮಾಡಿದ್ದೇನೆ ನೋಡಿ ಎಂದು ಎಲ್ಲರೆದುರು ಡಂಗುರ ಸಾರುತ್ತಾ ಹೋಗಬೇಕಿತ್ತೇ ಇತ್ಯಾದಿ ಗೊಂದಲಗಳು ಕಾಡತೊಡಗಿದವು. ಒಮ್ಮೆ ನಾನು ನಡೆದು ಬಂದ ದಾರಿ, ಕ್ರಮಿಸಿದ ದೂರ, ಕ್ರಮಿಸಬೇಕಾದ ದೂರವನ್ನೂ ಸ್ಥಗಿತಗೊಳಿಸಿದೆ. ಇನ್ನೂ ದೊಡ್ಡ ದೊಡ್ಡ ಯೋಜನೆಗಳು ಪುಸ್ತಕದಲ್ಲಿ ದಾಖಲುಗೊಂಡವು ಅಷ್ಟೇ. ಇಂಥ ಸ್ಥಿತಿ ನಿರ್ಮಾಣವಾದಾಗ ನನ್ನೊಂದಿಗೆ ನಿಂತವರು ನನ್ನ ಅಮ್ಮ,ಅಪ್ಪ,ತಮ್ಮ ಮತ್ತು ನನ್ನ ಗುರುಗಳು, ಸ್ನೇಹಿತರು, ಅಭಿಮಾನಿ ಬಳಗದವರು. ಹೌದು ನಾನು ಬದುಕಬೇಕು, ಸತ್ತು ಮಾಡುವುದೇನು? ತಪ್ಪೇ ಮಾಡದಿದ್ದರೂ ಹರಿಶ್ಚಂದ್ರ ಸ್ಮಶಾನ ಕಾದನಂತೆ, ಏಸು ಕ್ರಿಸ್ತನನ್ನು ಶಿಲುಬೆಗೆ ಏರಿಸಿದರಂತೆ, ಗಾಂಧೀಜಿಯನ್ನು ಕೊಂದು ಬಿಟ್ಟರು. . . . .ಇತ್ಯಾದಿ ದಾರ್ಶನಿಕರ ಜೀವನದ ಘಟನೆಗಳನ್ನು ನೆನಪಿಸಿಕೊಂಡೆನು. ಹೌದು ನನ್ನ ಕೆಲಸ ನನ್ನದು ಎಂದಿದ್ದಕ್ಕೆ ಇಷ್ಟೊಂದು ದೌರ್ಜನ್ಯ ಎದುರಿಸಬೇಕೇ? ಇನ್ನೇನನ್ನಾದರೂ ಮಾಡಬೇಕಿತ್ತೇ? ಯಾವಾಗಲೂ ಕಾಡಿದ ಪ್ರಶ್ನೆಯಾಗಿತ್ತು. ಪ್ರಾಮಾಣಿಕವಾಗಿ ನಮ್ಮ ಕೆಲಸಕ್ಕೆ ನ್ಯಾಯ ಒದಗಿಸಿರುವುದು ತಪ್ಪೇ ? ಇವೆಲ್ಲಾ ಯೋಚಿಸುವಂತಾಯಿತು. ಇತ್ತೀಚೆಗೆ ಈ “ಹೋರಾಟದ ಹಾದಿಯಲ್ಲಿ” ಅತಿಯಾದ ಕ್ರೂರ ದಿನಗಳನ್ನು ಎದುರಿಸಬೇಕಾದ ದಿನಗಳು ಬಂದವು. ಒಂದು ದೃಷ್ಟಿಯಲ್ಲಿ ನಾನು ಬದುಕಿದ್ದೇ ಹೆಚ್ಚು, ಏಕೆಂದರೆ ಯಾರೂ ಸರ್ವಜ್ಞರಲ್ಲ ಎಲ್ಲವನ್ನೂ ಪರಿಸರ, ಸಮಾಜ, ಜನಪದ ಕಲಾವಿದರಿಂದ, ಹಿರಿಯ ಸಾಧಕರಿಂದ, ಕವಿಗಳಿಂದ, ವಿದ್ವಾಂಸರಿಂದ ಕಲಿತಿರುತ್ತಾರೆ, ನಾನೂ ಕೂಡ ಹಾಗೆಯೇ . . . . ಆದರೆ ಕೆಲವು ಕೆಲಸಗಳನ್ನು ನಮ್ಮ ಸ್ವಂತಿಕೆಯಲ್ಲಿ ಮಾಡಿರುತ್ತೇವೆ, ಅದಕ್ಕಾಗಿಯೇ ಜೀವನದ ಅಮೂಲ್ಯ ಕ್ಷಣಗಳನ್ನು ವ್ಯಯ ಮಾಡಿರುತ್ತೇವೆ, ಮನರಂಜನೆಯನ್ನು ಪಡೆಯುವ ವಯಸ್ಸಿನ ಸಮಯವನ್ನೂ ಅದಕ್ಕಾಗಿ ಮೀಸಲಿರಿಸಿ ಸಾಧಕರನ್ನು ಮಾದರಿಯಾಗಿ ಇಟ್ಟುಕೊಂಡಿರುತ್ತೇವೆ. ಆಗ ನಾವು ಮಾಡಿದ ಕೆಲಸವನ್ನು ನಮ್ಮದು ಎಂದು ಹೇಳಿಕೊಳ್ಳುವುದು ತಪ್ಪೇನಲ್ಲ ಎನ್ನುವುದು ನನ್ನ ಅನಿಸಿಕೆ. ಆದರೆ ನನಗೆ ಬಣ್ಣದ ಹುಚ್ಚು ಇಲ್ಲವಾಗಿದ್ದರೆ ಇಂದು ಎಲ್ಲೋ ಒಂದು ಕಡೆ ಇತರ ಕ್ಷೇತ್ರಗಳಲ್ಲಿ ಬದುಕು ಕಟ್ಟಿಕೊಂಡು ನೆಮ್ಮದಿಯಾಗಿ ಬಹುಶ ಇರುತ್ತಿದ್ದೆ. ಅನೇಕೆ ಅಭಿಮಾನಿಗಳು ಕೇಳಿದ್ದಾರೆ, ರಂಗೋಲಿ ಹಿಂದೆ ಯಾಕೆ ಹೋಗುತ್ತಿದ್ದೀರಿ? ಅಕಾಡೆಮಿಕ್ ಕೆಲಸ ಮಾಡಿದ ಕ್ಷೇತ್ರಗಳು ಸಾಕಷ್ಟು ಇವೆ, ಅಲ್ಲಿ ದುಡಿಯಿರಿ, ಮಾದರಿಗಳು ಇದ್ದಾರೆ , ಈ ಕ್ಷೇತ್ರ ಬಿಟ್ಟು ಬಿಡಿ ಎಂದಿದ್ದರು. ಆದರೆ ನನ್ನ ಗುರುಗಳು ನೀನು “ರಂಗೋಲಿ specilaist ” ಎಂದು ಕರೆಯುತ್ತಿದ್ದರು. ನಂಗೆ ಆ ಪದದ ಅರ್ಥ ಅಂದು ಗೊತ್ತಿರಲಿಲ್ಲ ಹಾಗಂದ್ರೆ ಏನು? ಎಂದಾಗ ಕಣ್ಣು ಸ್ಪೆಷಲಿಸ್ಟ್ , ಕಿವಿ ಸ್ಪೆಷಲಿಸ್ಟ್ ಇದ್ದಂತೆ ನೀನು ರಂಗೋಲಿ ಸ್ಪೆಷಲಿಸ್ಟ್ ಎನ್ನುತ್ತಿದ್ದರು. ಅದಕ್ಕೆ ಸರಿಯಾಗಿ ಆರ್ಥಿಕ ಮೂಲಕ್ಕೆ ಒಂದು ಹೈಸ್ಕೂಲ್ ಸೇರಿಕೊಂಡೆ ಅದೇ ನಿರ್ಮಲ ಆಂಗ್ಲ ಮಾಧ್ಯಮ ಶಾಲೆ. ನನ್ನಲ್ಲಿ ಇರುವ ಸಾಮರ್ಥ್ಯವನ್ನು ಗುರುತಿಸಿ ವೇದಿಕೆ ನೀಡಿದ ಶಾಲೆ ಅದಾಗಿದೆ . ಅಲ್ಲಿ ಒಂದೆಡೆ ವೃತ್ತಿ ಇನ್ನೊಂದೆಡೆ ನನ್ನ ಸಂಶೋಧನೆ ರಂಗೋಲಿ ಪ್ರದರ್ಶನ ಆಕಾಶವಾಣಿ ದೂರದರ್ಶನದಲ್ಲಿ ಕಲಾವಿದೆಯಾಗಿ ಪರಿಚಯ ಎಲ್ಲಾ ಕಡೆ ಸ್ವಲ್ಪ ಆರ್ಥಿಕ ಆದಾಯವೂ ಬರುತ್ತಿತ್ತು. ಅದೇ ನನಗೆ ಸಂತೋಷ ನೀಡುತ್ತಿತ್ತು . ಒಂದು ಸಾಂಪ್ರದಾಯಕ ಕಲೆಯನ್ನು ನಾವು ಎತ್ತಿ ಹಿಡಿದರೆ ಅದು ನಮ್ಮನ್ನು ಬೆಳೆಸುತ್ತದೆ ಎನ್ನುವುದನ್ನು ನಾನು ಅರಿತೆ . ಈ ನಡುವೆ ಎಲ್ಲಾ ಕ್ಷೇತ್ರಗಳಿಗೂ ವಿವಿಧ ವೇದಿಕೆಗಳಿವೆ ರಂಗೋಲಿಗೂ ಒಂದು ಪತ್ರಿಕೆ ಯಾಕೆ ಮಾಡಬಾರದು ಎಂದು ಗುರುಗಳನ್ನು ಕೇಳಿದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಒಂದಿಷ್ಟು ರಂಗೋಲಿ ಸಂಚಿಕೆಗಳು ಓದುಗರಿಗೆ ಸೇರಿದವು. ನೂರಾರು ಚಂದಾದಾರರು ತಯಾರಾದರು. ಇನ್ನು ಬೃಹತ್ ರಂಗೋಲಿ ವಿನ್ಯಾಸಗಳ ಪ್ರದರ್ಶನ ಸಾವಿರಾರು ಕಡೆ ಇಂದಿಗೂ ಅದರ ಲೆಕ್ಕವೇ ನನಗಿಲ್ಲ. ಅದಕ್ಕಂತೂ ಸಾವಿರಾರು ರೂಪಾಯಿಗಳು ನನಗೆ ಸೇರಿದಾಗ ಆದ ಸಂತೋಷ ಹೇಳತೀರದು. ಇನ್ನು ರಂಗೋಲಿ ಪೈಂಟಿಂಗ್ ನಲ್ಲಿ ತಂದಾಗ ಸಾವಿರಾರು ರೂಪಾಯಿಗಳನ್ನು ನೀಡಿ ಡಾ.ಮೋಹನ್ ಆಳ್ವ ರಂಥವರು ನನಗೆ ನೀಡಿ ಪೈಂಟಿಂಗ್ ಖರೀದಿಸಿದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಈ ಕಾಲ ಬದುಕಿನ ಪಯಣದಲ್ಲಿ ಪುಟ್ಟ ಪುಟ್ಟ ತೊಂದರೆಗಳು ಬಿಟ್ಟರೆ ೭ ವರ್ಷಗಳಿಂದ ಇದಿರಿಸಿದ ನೋವುಗಳು ಎದುರಿಸಿರಲಿಲ್ಲ . ಅದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ನನ್ನ ಕೆಲಸ ಮಾಡುತ್ತಲೇ ಬಂದೆ. ಆದರೆ ಅದೇ ನನ್ನ ದೌರ್ಬಲ್ಯ ಎಂದು ತಿಳಿದ ಕೆಲವೇ ಮನಸ್ಸುಗಳು ಹೊಂಚು ಹಾಕಿದ್ದೇ ನನಗೆ ತಿಳಿಯಲಿಲ್ಲ . ೨೦೧೮ ಜನವರಿ ೨೬ ನನ್ನ ಜೀವನದ ಅತೀ ಕರಾಳ ದಿನವದು. ಯಾವುದೇ ತಪ್ಪು ಮಾಡದಿದ್ದರೂ ಕೂಡಾ “ಕೆಲವೇ ಕ್ರೂರ ಮನಸ್ಸುಗಳು ನನ್ನನ್ನು ಉದ್ದೇಶಪೂರ್ವಕವಾಗಿ” ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ ಸಂಚು “ಅದೂ ಕೂಡಾ ನಾನು ಮಾಡಿದ ಕೆಲಸ ನನ್ನದು ಎಂದು ಹೇಳಿಕೊಂಡಿದ್ದೇ ಮೂಲ ಕಾರಣ ಎನ್ನುವುದು ಇನ್ನಷ್ಟು ಆಘಾತ ನೀಡಿದ ಅಂಶವಾಗಿತ್ತು””. ಮತ್ತು ಒಂದು ಒಳ್ಳೆ ಕೆಲಸ ಪ್ರಾಮಾಣಿಕವಾಗಿ ಅಕಾಡೆಮಿಕ್ ಶಿಸ್ತಿನಲ್ಲಿ ಅಕಾಡೆಮಿಕ್ ಸಂಸ್ಥೆಯಲ್ಲಿ ಮಾಡಿದ್ದೇ ತಪ್ಪಾಗಿತ್ತು ಎನ್ನುವುದು ಇನ್ನಷ್ಟು ಆಘಾತಕಾರಿಯಾಗಿತ್ತು.ಹಾಗಾದರೆ ಈ ಸಮಾಜದಲ್ಲಿ ಹೇಗೆ ಬದುಕಬೇಕು? ಚರ್ಚೆ ವಾದಗಳು ಬರೀ ಬಂಡೆ ಕಲ್ಲಿನ ಮೇಲೆ ನೀರೆರೆದಂತಾಯಿತು. ಪ್ರಜಾಪಭುತ್ವ ರಾಷ್ಟ್ರದಲ್ಲಿ ಒಬ್ಬ ಪ್ರಜೆಗೆ ತೊಂದರೆ ಆದರೆ ಆತ ಕಾನೂನಿನ ಮೊರೆ ಹೋಗುತ್ತಾನೆ, ಅಲ್ಲಿ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ಅಥವಾ ನಂಬಿಕೆ. ಆದರೆ ನನ್ನ ಜೀವನದ ಜನವರಿ ೨೬ರ ಆ ಘಟನೆ “ಗುಂಪುಗಾರಿಕೆಯ” ಪೂರ್ವ ನಿಯೋಜಿತ ಯೋಜನೆ ಆದ ಕಾರಣ ಅದು ಸರಪಳಿಯಂತೆ ಹಬ್ಬಿಕೊಂಡಿರುವ ಕಾರಣ ಅಭಿಮನ್ಯುವಿನಂತೆ ಚಕ್ರವ್ಯೂಹದಲ್ಲಿ ಸಿಲುಕಿಸಿದರು. ಆದರೆ ಒಂದಿಷ್ಟು ಅಭಿಮಾನಿಗಳು ಹಿರಿಯರು ಕುಟುಂಬದವರು ಮಾರ್ಗದರ್ಶನ ಸಲಹೆ ನೀಡಿದರು. ಉಡುಪಿಯ ಶ್ರೀ ಲಕ್ಷ್ಮೀ ಬಾಯಿ ಅವರು ನನಗಿಂತ ಹೆಚ್ಚು ನೊಂದುಕೊಂಡು ನಾನಿದ್ದೇನೆ ಹೆದರಬೇಡ ಎಂದರು. ನನ್ನ ಅಮ್ಮ, ತಮ್ಮ , ವಯಸ್ಸಾದ ಅಪ್ಪ, ತಂಗಿ , ಅಕ್ಕ, ಅತ್ತೆ -ಮಾವಂದಿರು , ಇವರೆಲ್ಲರಿಗೂ ನಿಜ ವಿಷಯ ತಿಳಿಸಿದ್ದೆನು. ಅವರ ಒಂದೊಂದು ಮಾತುಗಳೂ ನನಗೆ ನಾನಿಂದು ಭೂಮಿ ಮೇಲೆ ಬದುಕಿರಲು ಸಾಧ್ಯವಾಗಿದೆ. ಏಕೆಂದರೆ ನನಗೆ “ಗುಂಪುಗಾರಿಕೆ ಮಾಡಿ ಗೊತ್ತಿಲ್ಲ, ದ್ವೇಷ ಸಾಧಿಸಿಯೂ ಗೊತ್ತಿಲ್ಲ, ದುಡಿಯುವ ಎತ್ತಿನಂತೆ ಕೆಲಸ ಮಾಡುವುದು ಮಾತ್ರ ಗೊತ್ತು” ಆದರೆ ಸೃಜನಾತ್ಮಕ ಕೆಲಸ ನನ್ನದಾಗಿರಬೇಕು ಎನ್ನುವ ಮುಖ್ಯ ವಿಷಯವನ್ನು ನನ್ನ ಗುರುಗಳು ನಂಗೆ ಮನಸ್ಸಲ್ಲಿ ಗಟ್ಟಿ ಮಾಡಿ ಮಾಡಿದ್ದರು .ಸಾಧಕರ ದಾರಿಯನ್ನು ಅವಲೋಕಿಸಿ ನನ್ನದೇ ದಾರಿಯನ್ನು ನಾನು ಹುಟ್ಟು ಹಾಕಬೇಕು ಎನ್ನುವುದು ನನ್ನ ನಿಲುವು . ಎನ್ನುವುದು ನನ್ನ ಒಳ ಮನಸ್ಸಿನ ತುಡಿತ. ಈ ಭೂಮಿ ಮೇಲೆ ಎಷ್ಟು ದಿನ ಬದುಕಿರುತ್ತೇವೂ ಗೊತ್ತಿಲ್ಲ, ಒಂದಿಷ್ಟು ಒಳ್ಳೆ ಕೆಲಸ ಮಾಡಬೇಕು ಎನ್ನುವುದು ನನ್ನ ಆಸೆ ಅಷ್ಟೇ, ಅದನ್ನು ಖಂಡೀತ ಸಮಾಜ ಒಪ್ಪಿಕೊಳ್ಳುತ್ತದೆ. ಆದರೆ ಆ ಕೆಲಸ ಮಾಡಲು ಬಿಡದಿರುವವರು ಗಂಟು ಬಿದ್ದ್ದರೆ ಬಹಳ ಕಷ್ಟ, ಅಂತಹ ಪರಿಸ್ಥಿತಿ ನನಗೆ ಇದಿರಾಯಿತು. ಆದರೆ ಭಕ್ಷಿಸುವವರು ಇದ್ದಂತೆ ರಕ್ಷಿಸುವವರು ದೊರೆತರು, ಜೀವಂತವಾಗಿ ಬದುಕಲು ಅನುವು ಮಾಡಿಕೊಟ್ಟರು. ಅವರ ಹೆಸರನ್ನು ಮುಂದೆ ನನ್ನ ಆತ್ಮಕಥೆಯಲ್ಲಿ ಹೇಳಿಕೊಳ್ಳಲಿದ್ದೇನೆ, ಏಕೆಂದರೆ ಇನ್ನೂ ಆ ಸಮಸ್ಯೆ ಇಂದ ನಾನೂ ಸಂಪೂರ್ಣವಾಗಿ ಹೊರಬಂದಿಲ್ಲ , ಇದಕ್ಕಾಗಿ ಕೆಲವೊಂದು ವಿಷಯಗಳನ್ನು ಗೌಪ್ಯವಾಗಿ ಇಡಬೇಕಾಗಿದೆ . ನ್ಯಾಯ ನೀಡಬೇಕಾದ ಜವಾಬ್ದಾರಿ ಇರುವವರು ಹೇಗೆ ಅಡ್ಡಗಾಲು ಹಾಕಿದರು, ಆದರೆ ಅದೇ ಹುದ್ದೆಯಲ್ಲಿದ್ದವರು ಇನ್ನೊಬ್ಬರು ಹೇಗೆ ರಕ್ಷಣೆ ನೀಡಿದರು ಎನ್ನುವುದನ್ನು ಮುಂದಿನ ದಿನಗಳಲ್ಲಿ ಹೇಳಲಿದ್ದೇನೆ. ಅಂದರೆ ಎಲ್ಲರನ್ನು ಒಂದೇ ದೃಷ್ಟಿಕೋನದಲ್ಲಿ ನೋಡಲಾಗುವುದಿಲ್ಲ ಎನ್ನುವುದಕ್ಕೆ ಈ ಉದಾಹರಣೆ ಅಷ್ಟೇ. ಇನ್ನೂ ಆ ಕ್ರೂರ ದಿನಗಳು ಮುಗಿದಿಲ್ಲ. ಇದಕ್ಕಾಗಿಯೇ ಈ website ತೆರೆಯುತ್ತಿರುವೆ.
ಉದ್ದೇಶಗಳು :
ದೇಸಿ ಕಲೆ ಸಂಸ್ಕೃತಿಯ ಸಂಗ್ರಹ-ಅಧ್ಯಯನ
ಅಕಾಡೆಮಿಕ್ ಶಿಸ್ತಿನಲ್ಲಿ ಹೆಚ್ಚು ಅಧ್ಯಯನವಾಗದಿರುವ ರಂಗೋಲಿ ಕಲೆಯ ಕುರಿತು ತರಭೇತಿ-ಸಂವಾದ -ದಾಖಲೀಕರಣ
ಜಾನಪದ ಕಲಾವಿದರ, ವಿದ್ವಾಂಸರ ಸಂದರ್ಶನ – ಅವರಿಂದ ನೆಲಮೂಲ ಸಂಸ್ಕೃತಿಯ ಕುರಿತು ಮಾಹಿತಿ ಸಂಗ್ರಹಣೆ
ಬುಡಕಟ್ಟು ಸಮುದಾಯದವರಲ್ಲಿ ಇರುವ ಸೇಡಿ -ಹಲಿ -ಹಸೆ ಚಿತ್ತಾರದ ಸಂಗ್ರಹ ಅವರ ಸಂದರ್ಶನ
ನಿರಂತರವಾಗಿ ರಂಗೋಲಿ ಕಲಿಯಿರಿ ಎನ್ನುವ ಶೀರ್ಷಿಕೆಯಲ್ಲಿ ಹೊಸ ಹೊಸದಾಗಿರುವ ಸಾಂಪ್ರದಾಯಿಕ ಮತ್ತು ಸ್ವರಚಿತ ರಂಗೋಲಿಯನ್ನು ಬಣ್ಣಗಳ ಮುಲಕ ತರಬೇತಿ ನೀಡುವುದು
ಯೋಜನೆಗಳು :
ನೆಲಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ ಮೂಲ ಪ್ರತಿಭೆಗಳ ಸಂದರ್ಶನ-ದಾಖಲಾತಿ, ಈ ಕ್ಷೇತ್ರದಲ್ಲಿ ಅಕಾಡೆಮಿಕ್ ಶಿಸ್ತಿನಲ್ಲಿ ಅಧ್ಯಯನ ಮಾಡಿದ ವಿದ್ವಾಂಸರ ಸಂದರ್ಶನ. ಜನಪದ ಕಲಾವಿದರ ಸಂದರ್ಶನ.
ರಂಗೋಲಿ ಎನ್ನುವುದು ಸಂಸ್ಕೃತೀಕರಣ ಹೊಂದಿರುವ ಪದವಾಗಿದೆ. ಮೂಲದಲ್ಲಿ ಈ ಕಲೆಗೆ ಸೇಡಿ ಬರೆಯುವುದು ಎಂದೇ ಕರೆಯುತ್ತಿದ್ದರು.ಈ ಕಲೆಯ ವ್ಯಾಪಕತೆ, ಸ್ವರೂಪ ಮತ್ತು ಕಲಾವಿದರ ಸಂದರ್ಶನ. ಬುಡಕಟ್ಟು ಜನಸಮುದಾಯದಿಂದ ತೊಡಗಿ ಸಾಮಾನ್ಯ ಜನರು ಹಾಕುವ ಚಿತ್ತಾರ ಕ್ಷೇತ್ರದ ಸಂಗ್ರಹ ದಾಖಲೆ ಮಾಡುವುದಾಗಿದೆ.
ರಂಗೋಲಿ ಚಿತ್ತಾರದ ಇನ್ನೊಂದು ಮುಖವೇ ಮಂಡಲಗಳು. ಇದನ್ನು ಬುಡಕಟ್ಟಿನಿಂದ ತೊಡಗಿ ಮೇಲ್ವರ್ಗ ಜನಸಮುದಾಯದವರೆಗೂ ನಿಯಮಬಧ್ದವಾಗಿ ರಚಿಸುತ್ತಾರೆ. ಇದರ ಸಂಗ್ರಹ, ಸಂದರ್ಶನ.
ನನ್ನಧ್ವನಿ : “ರಂಗೋಲಿ ಭಾರತದ ಶುಧ್ದ ಜನಪದ ಕಲೆಯಾಗಿದೆ, ಮೂಲತಹ ಇದಕ್ಕೆ “ಸೇಡಿ ಬರೆಯುವುದು” “ಗೀಟ್ ಹಾಕುವುದು” ಎನ್ನುತ್ತಿದ್ದರು. ಹಳ್ಳಿಯಲ್ಲಿ ಪ್ರತಿನಿತ್ಯ ಅಂಗಳದಲ್ಲಿ, ಹೊಸ್ತಿಲಿನಲ್ಲಿ ಜಾತಿ–ಮತ–ಕಟ್ಟುಪಾಡುಗಳನ್ನು ಮೀರಿ ಕೋಟಿ ಕೋಟಿ ರಂಗೋಲಿಗಳು ಅರಳುತ್ತವೆ, ಸಂಜೆ ಮುದುಡುತ್ತವೆ. ಇಂದಿಗೂ ಕೆಲವು ಹಳ್ಳಿಯ ಮುಗ್ಧ ಜನರು ಗೀಟ್ ಹಾಕುವುದು ಎನ್ನುವ ಪದ ಬಳಸುತ್ತಾರೆ. ಬುಡಕಟ್ಟು ಸಮುದಾಯದ ಗಾಮೊಕ್ಕಲಿಗರು ಸೇಡಿ ಬರೆಯುವುದು ಎನ್ನುವ ಪದ ಬಳಕೆಯಲ್ಲಿ ಗೋಡೆಯಲ್ಲಿ ಚಿತ್ರಿಸುತ್ತಾರೆ. ಹಾಲಕ್ಕಿ ಜನ ಸಮುದಾಯದವರು ಇಂದಿಗೂ ಹೊಸ್ತಿಲಿಗೆ ಸೇಡಿ ಮೂಲಕ ಹಲಿ ಬರೆಯುತ್ತಾರೆ. ರಂಗೋಲಿ ಕಲೆಯನ್ನು ಧಾರ್ಮಿಕ ಕಲೆ ಎಂದು ಬಿಂಬಿಸಲಾಗುತ್ತಿದೆ. ಆದರೆ ರಂಗೋಲಿಯ ವಿನ್ಯಾಸಗಳಲ್ಲಿ, ಉದ್ದೇಶಗಳಲ್ಲಿ ಧಾರ್ಮಿಕ ಅಂಶಗಳಿವೆ ನಿಜ. ನಮ್ಮ ಭಾರತದ ಎಲ್ಲಾ ಜನಪದ ಕಲೆಗಳಲ್ಲಿಯೂ ಮುಗ್ಧ ಜನರ ಭಕ್ತಿಯ,ಆರಾಧನೆಯ ಅಂಶಗಳನ್ನು ಕಾಣುತ್ತೇವೆ.ರಂಗೋಲಿ ಎನ್ನುವ ಪದ ಸಂಸ್ಕೃತೀಕರಣಗೊಂಡ ಪದವಾಗಿದೆ. ಈ ಕಾರಣಕ್ಕಾಗಿ ಈ ಕಲೆಯನ್ನು ಒಂದು ಸಮುದಾಯಕ್ಕೆ ಸಿಇಮಿತವಾದ ಕಲೆ ಎಂದು ಬಿಂಬಿಸಿದರೆ ಕಲೆಗೆ ಮಾಡುವ ಅನ್ಯಾಯವಾಗುತ್ತದೆ. ಈ ಕಳೆಯ ಇನ್ನೊಂದು ಮುಖವೇ “ಮಂಡಲಗಳು“. ಇದನ್ನೂ ಕೂಡಾ ಕಾಡ್ಯನಾಟದಂತಹ ಇನ್ನೂ ಅನೇಕ ಆಚರಣೆಗಳಲ್ಲಿ ಬುಡಕಟ್ಟು ಸಮುದಾಯದವರು ಮಂಡಲಗಳನ್ನು ರಚಿಸಿದ್ದು ದಾಖಲಾಗಿದೆ. ಭೂತಾರಾಧನೆಯಲ್ಲಿ ಚಿಕ್ಕ ಚಿಕ್ಕ ಮಂಡಲಗಳ ರೇಖೆಗಳನ್ನು ಚಿತ್ರಿಸುವುದು ಕಂಡು ಬರುತ್ತದೆ ಇನ್ನು “ಹಸೆ ಚಿತ್ತಾರ“ದ ಬಗ್ಗೆನೂ ಗೊಂದಲಗಳನ್ನು ಸೃಷ್ಟಿ ಮಾಡಲಾಗುತ್ತಿದೆ. “ಹಸೆ” ಎನ್ನುವ ಪದದ ಅರ್ಥವೇ ಚಾಪೆ ಎಂದಾಗಿದೆ. ಮದುವೆ ಸಂದರ್ಭದಲ್ಲಿ ಬಿಡಿಸುವ ಚಿತ್ರವೇ ಹಸೆ ಚಿತ್ತಾರವಾಗಿದೆ. ಬುಡಕಟ್ಟು ಸಮುದಾಯದವರು ವಿಶೇಷವಾಗಿ ಗೋಡೆ ಮೇಲೆ ಮತ್ತು ನೆಲದ ಮೇಲೆ ಚಿತ್ರಿಸುತ್ತಾರೆ. ನಾಗರೀಕತೆಗೆ ಒಗ್ಗಿಕೊಂಡ ಸಾಮಾನ್ಯ ಜನಸಮುದಾಯದವರು ಕರೆಯುವ ಹೆಸರುಗಳಲ್ಲಿ ಭಿನ್ನತೆಗಳಿವೆ” ರಂಗೋಲಿ ಕಲೆ ನಮ್ಮ ಭಾರತದ ವಿವಿಧ ರಾಜ್ಯಗಳಲ್ಲಿ ಪೂಕಳಂ, ಅಲ್ಪನಾ, ಕೋಲಮ್, ಮುಗ್ಗುಲು, ರಂಗೋಳಿ, ರಂಗೋಲಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ೨೦ ವರ್ಷಗಳಿಂದ ಈ ಕಲೆಯಲ್ಲಿನ “ಅಧ್ಯಯನ–ಸಂಶೋಧನೆಯ ಹಿನ್ನೆಲೆಯಲ್ಲಿ” ನಾನು ಕಂಡುಕೊಂಡ ಸತ್ಯವನ್ನು ಈ web site ಮೂಲ ಹೇಳ ಹೊರಟಿದ್ದೇನೆ.
ಆಧುನೀಕರಣದ ನಾಗಾಲೋಟದಲ್ಲಿ ನಾವಿಂದು ಇಂತಹ ಕಲೆಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲು. ಇದರ ನಡುವೆ ನಾವು ಮಾಡಿದ ಕೆಲಸವನ್ನು ಹೋರಾಟದ ಮೂಲಕ ನಮ್ಮತನವನ್ನು ಉಳಿಸಿಕೊಳ್ಳುವ ಪರಿಸ್ಥಿತಿ ಇನ್ನೂ ಬೇಸರ ತರುತ್ತದೆ. ಉಡುಪಿಯ ರಂಗವಲ್ಲಿ ಬ್ರಹ್ಮ ಬಿ.ಪಿ.ಬಾಯಿರಿ ಸಾಕಷ್ಟು ರಂಗೋಲಿ ಚಿತ್ರಗಳನ್ನು ಸಂಗ್ರಹ ಮತ್ತು ಸ್ವರಚನೆ ಮಾಡಿದ್ದರು. ಆದರೆ ಇಂದು ಆ ಚಿತ್ರಗಳು ಯಾರದ್ದೋ ಹೆಸರಲ್ಲಿ ನಕಲಾಗಿಪ್ರಕಟಣೆಗೊಳ್ಳುತ್ತಿವೆ. ಇದು ಬಹಳ ಬೇಸರ ತರುವ ಸಂಗತಿ. ಈ ಕಾರಣಕ್ಕಾಗಿ ಈ website ನಲ್ಲಿ ಒಂದು blogಗೆ ಅವರಿಗೆ ಗೌರವ ಸಲ್ಲಿಸಲು ಅವರ ಹೆಸರನ್ನು ಇಟ್ಟಿದ್ದೇನೆ. ರಂಗೋಲಿ ಕೂಡಾ ಒಂದು ಜನಪದ ಕಲೆ. ಅವರವರ ಶ್ರಮ ಅವರವರಿಗೆ ಸಲ್ಲಬೇಕು“ರಂಗೋಲಿ ಕಲೆಯು ತನ್ನ ಮೂಲ ಸ್ವರೂಪವನ್ನು ಇಟ್ಟುಕೊಂಡು ಜಾಗತೀಕರಣಕ್ಕೆ ಅನುಗುಣವಾಗಿ ಬೆಳೆಯಬೇಕಾಗಿದೆ.ದಿನಬೆಳಗಾದರೆ ರಂಗೋಲಿ ಮೂಲಕ ಅರಳುವ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಮುಗ್ಧ ಮಕ್ಕಳು ಅರಿಯಬೇಕಾಗಿದೆ. ಈ ಕಲೆಯು ಶಾಲಾ ಶಿಕ್ಷಣದಲ್ಲಿ ಸೇರ್ಪಡೆಯಾಗಬೇಕು,. ಡಾ.ಭಾರತಿ ಮ